ಖಾದೀ

	ಯಂತ್ರಗಳನ್ನು ಉಪಯೋಗಿಸದೆ ಕೈಯಿಂದಲೆ ಹತ್ತಿ ಹಿಂಜಿ, ತಕಲಿ ಅಥವಾ ಚರಕಗಳಿಂದ ನೂಲು ಮಾಡಿಕೊಂಡು ಕೈಮಗ್ಗಗಳಿಗೆ ಹಾಕಿ ತಯಾರಿಸಿದ ಬಟ್ಟೆ. ಹಬೆ ಮತ್ತು ಎಣ್ಣೆಯ ಯಂತ್ರಗಳು, ವಿದ್ಯುಚ್ಚಾಲಿತ ಯಂತ್ರಗಳು ಬಳಕೆಗೆ ಬರುವ ಮುನ್ನ ಎಲ್ಲ ದೇಶಗಳವರೂ ಕೈಯಿಂದಲೆ ತಮ್ಮ ಬಟ್ಟೆಗಳನ್ನು ಮಾಡಿಕೊಳ್ಳುತ್ತಿದ್ದರು. ಉತ್ತರ ಮತ್ತು ದಕ್ಷಿಣ ಅಮೆರಿಕದ ಇಂಡಿಯನರು, ಭಾರತದವರು ಇಂಥ ಬಟ್ಟೆ ಮಾಡುವ ಕಲೆಯಲ್ಲಿ ಅದ್ವಿತೀಯರಾಗಿದ್ದರು. ಇದರಿಂದ ಬಹುಜನರ ಜೀವನ ಸುಲಭವಾಗಿ ನಿರ್ವಹಣೆಯಾಗುತ್ತಿತ್ತು. ಇಂಗ್ಲೆಂಡ್ ದೇಶದಲ್ಲಿ ನೂಲು ತೆಗೆಯುವ ಯಂತ್ರ (ಸ್ಪಿನಿಂಗ್ ಜೆನಿ) ನಿರ್ಮಾಣವಾದ ಮೇಲೆ ಯಂತ್ರದ ಉಪಟಳಕ್ಕೆ ಸಿಕ್ಕಿ ಈ ಉದ್ಯಮ ಮೂಲೆಗುಂಪಾಯಿತು. ಯಂತ್ರೋದ್ಯಮದಿಂದ ವಸ್ತ್ರೋತ್ಪನ್ನ ವಿಧಾನ ಮಾನವನ ನಾಗರಿಕತೆಗೆ ಒಂದು ಹೊಸ ರೂಪವನ್ನೇ ಕೊಟ್ಟಿತು.

	ವ್ಯಾಪಾರಕ್ಕಾಗಿ ಭಾರತಕ್ಕೆ ಬಂದ ಬ್ರಿಟಿಷರು ಆರಂಭದಲ್ಲಿ ಮುರ್ಷಿದಾಬಾದ್ ರೇಷ್ಮ ವಸ್ತ್ರ, ಢಾಕಾ ಮಸ್ಲಿನ್‍ಗಳನ್ನು ಕೊಂಡೊಯ್ದು ಮಾರಿ 200%ರಷ್ಟು ಲಾಭ ಸಂಪಾದಿಸುತ್ತಿದ್ದರು. ಕಾಲಕ್ರಮೇಣ, ಇಲ್ಲಿ ತಮ್ಮ ವ್ಯಾಪಾರ ಕುದುರಿದಂತೆಲ್ಲ ಅದರ ಆಧಾರದ ಮೇಲೆ ರಾಜಕೀಯ ಸಾಮ್ರಾಜ್ಯವನ್ನು ಕಟ್ಟಿ ಇಂಗ್ಲೆಂಡಿನ ಮ್ಯಾಂಚೆಸ್ಟರ್ ಮತ್ತು ಲ್ಯಾಂಕ್‍ಷೈರ್ ಗಳಲ್ಲಿ ನಡೆಯುತ್ತಿದ್ದ ನೂಲುವ ಮತ್ತು ವಸ್ತ್ರೋತ್ಪನ್ನ ಮಾಡುವ ಯಂತ್ರೋದ್ಯಮಕ್ಕೆ ನೆರವಾಗುವಂತೆ ಭಾರತದ ಆರ್ಥಿಕ ನೀತಿಯನ್ನು ರೂಪಿಸಿಕೊಂಡರು. ಇದರ ಆಘಾತಕ್ಕೆ ಸಿಕ್ಕಿ. ಚೇತನಹೀನವಾದ ಭಾರತದ ಗ್ರಾಮೋದ್ಯೋಗಗಳ ಪೈಕಿ ನೂಲು ತೆಗೆಯುವ ಉದ್ಯಮ ಮತ್ತು ನೆಯ್ಗೆ ಪ್ರಧಾನವಾದುವು. ಇವು ಖಿಲವಾದ ಬಗೆ ಒಂದು ಕರುಣಾಜನಕ ಕಥೆಯೇ ಅಗಿದೆ. ಭಾರತದ ಈ ಆರ್ಥಿಕ ಅವನತಿ, ಬ್ರಿಟನ್ನಿನ ಆರ್ಥಿಕ ಸಾಮ್ರಾಜ್ಯದ ಅಭಿವೃದ್ಧಿಗೆ ಕಾರಣವಾಯಿತು. ಭಾರತ ಬ್ರಿಟನ್ನಿನ ಒಂದು ಅತ್ಯಧಿಕ ಲಾಭದ ಮಾರುಕಟ್ಟೆಯಾಗಿ ಪರಿಣಮಿಸಿತು. ಇದನ್ನು ಕುರಿತು ಒಂದು ಆಧಾರಯುತ ಉಲ್ಲೇಖ ಈ ರೀತಿ ಇದೆ: 1803ರಲ್ಲಿ ಕೇವಲ 3 ಲಕ್ಷ ರೂ. ಬೆಲೆ ಬಾಳುವ ಬಟ್ಟೆ ಭಾರತಕ್ಕೆ ರಫ್ತಾಯಿತು. ಅದು 1829ರಲ್ಲಿ 29 ಲಕ್ಷಕ್ಕೆ ಏರಿ, 1929ರ ವೇಳೆಗೆ 66ಕೋಟಿ ರೂಪಾಯಿ ಬೆಲೆ ಬಾಳುವ ಬಟ್ಟೆಗೂ 6 ಕೋಟಿ ರೂಪಾಯಿ ಬೆಲೆಬಾಳುವ ನೂಲಿಗೂ ಏರಿತು. ಬ್ರಿಟಿಷರು ಭಾರತದಲ್ಲಿ ಸ್ಥಾಪಿಸಿದ ವಿಶ್ವವಿದ್ಯಾಲಯ ಶಿಕ್ಷಣ ಪದ್ಧತಿ, ನ್ಯಾಯಾಲಯಗಳು ಮತ್ತು ಶಾಸನ ಸಭೆಗಳು ಭಾರತದ ಸುತ್ತ ದಾಸ್ಯ ಶೃಂಖಲೆಯನ್ನು ರಚಿಸಿದಂತೆಯೇ ಲ್ಯಾಂಕಷೈರಿನ ಶಕ್ತಿಚಾಲಿತ ನೂಲುವ ಯಂತ್ರಗಳೂ ಶಕ್ತಿ ಚಾಲಿತ ನೆಯ್ಗೆ ಯಂತ್ರಗಳೂ ಆರ್ಥಿಕ ದಾಸ್ಯ ಶೃಂಖಲೆಯನ್ನು ರಚಿಸಿದುವು.

	ಸ್ವದೇಶಿ ಚಳುವಳಿ : ಇಪ್ಪತ್ತನೆಯ ಶತಮಾನದ ಆದಿಭಾಗದಲ್ಲಿ ಭಾರತದಲ್ಲಿ ರಾಷ್ಟೀಯ ಪ್ರಜ್ಞೆ ಜಾಗ್ರತವಾಯಿತು. ಬಾಲಗಂಗಾಧರ ತಿಲಕ್, ಬಿಪಿನ್ ಚಂದ್ರಪಾಲ್ ಮತ್ತು ಲಾಲಾ ಲಜಪತ್‍ರಾಯ್ ಎಂಬ ಮೂವರು ಮುಖಂಡರು ಸ್ವದೇಶಿ ಚಳವಳಿಯನ್ನು ಆರಂಭಿಸಿದರು. ಆಗ್ಗೆ ಇದು ಕೇವಲ ರಾಜಕೀಯ ಉದ್ದೇಶದಿಂದ ಕೂಡಿತ್ತು. ಈ ಉದ್ದೇಶ ಸಾಧನೆಗೆ ಅವರು ವಿದೇಶೀ ವಸ್ತ್ರ ಬಹಿಷ್ಕಾರ ಎಂಬ ತಂತ್ರವನ್ನು ಉಪಯೋಗಿಸಿಕೊಂಡರು. ಇದು ಪ್ರಧಾನವಾಗಿ ಭಾವೋದ್ರೇಕ ಸ್ವರೂಪದ್ದಾಗಿದ್ದು ಬ್ರಿಟಷ್ ಪ್ರಭುತ್ವದ ಧೋರಣೆಗೆ ವಿರುದ್ಧವಾದ ಕಾರ್ಯಕ್ರಮವಾಗಿತ್ತು. 1905ರಲ್ಲಿ ನಡೆದ ಕಲ್ಕತ್ತ ಕಾಂಗ್ರೆಸ್ ಅಧಿವೇಶನ ಸ್ವದೇಶೀ ಚಳವಳಿಗೆ ಬೆಂಬಲ ನೀಡಿತು. ಅಂದಿನ ಕಾಂಗ್ರೆಸ್ಸಿನ ಸೂತ್ರವನ್ನು ಹಿಡಿದಿದ್ದ ಮಿತವಾದಿಗಳು ರಾಷ್ಟ್ರೀಯವಾದಿಗಳ ಉಗ್ರವಾದವನ್ನು ಒಪ್ಪದಿದ್ದರೂ ಸ್ವದೇಶೀ ಚಳವಳಿಗೆ ಬೆಂಬಲ ನೀಡಿದರು. ದೇಶದಲ್ಲಿ ಉತ್ಕ್ರಮಣಾವಸ್ಥೆಯಲ್ಲಿರುವ ಕೈಗಾರಿಕೆಗಳಿಗೆ ರಕ್ಷಣೆಯನ್ನೂ ಪ್ರೋತ್ಸಾಹವನ್ನೂ ನೀಡುವುದು ಅತ್ಯಂತ ಅಗತ್ಯವೆಂದು ಅವರು ಭಾವಿಸಿದರು.

	1919ರಲ್ಲಿ ಮಹಾತ್ಮ ಗಾಂಧೀಜಿ ಕಾಂಗ್ರೆಸ್ ಸಂಸ್ಥೆಯ ನಾಯಕತ್ವವನ್ನು ವಹಿಸಿಕೊಂಡ ಮೇಲೆ, ಸ್ವದೇಶೀ ಚಳವಳಿಯ ಅರ್ಥ ವಿಸ್ತಾರವಾಯಿತು. ಅದು ಭಾವೋದ್ರೇಕದ ಮತ್ತು ಆರ್ಥಿಕಸ್ತರಗಳನ್ನು ಮೀರಿ ಮೇಲೆದ್ದು ಸ್ವರಾಜ್ಯ ಪ್ರಾಪ್ತಿಗೆ ಒಂದು ಪ್ರಭಾವಯುತ ಸಾಧನವಾಗಿ ಪರಿಣಮಿಸಿತು. ಅವರು ಹೀಗೆ ಹೇಳಿದರು. 'ನಾವು ಸ್ವರಾಜ್ಯವನ್ನು ಅರ್ಥ ಮಾಡಿಕೊಳ್ಳುವ ಮುನ್ನ ಸ್ವದೇಶೀ ಧೋರಣೆಯ ಬಗೆಗೆ ಪ್ರೇಮವನ್ನಷ್ಟೇ ಅಲ್ಲದೆ, ತೀವ್ರ ಪ್ರೇಮವನ್ನು ಹೊಂದಬೇಕು.' ಸ್ವದೇಶೀ ಎಂದರೆ, ಕೇವಲ ವಸ್ತ್ರವೊಂದೇ ಅಲ್ಲದೆ, ಎಲ್ಲ ಸ್ವದೇಶೀ ವಸ್ತುಗಳೆಂದು ಅವರು ವ್ಯಾಖ್ಯಾನ ಮಾಡಿದರು. ಹೀಗೆ, ಮೊದಲು ಮೊದಲು ವಿಧ್ವಂಸಕ ಸ್ವರೂಪ ತಾಳಿದ್ದ ಸ್ವದೇಶೀ ತತ್ತ್ವ ರಚನಾತ್ಮಕ ಸ್ವರೂಪವನ್ನು ತಾಳಿತು. ಈ ರಚನಾತ್ಮಕ ಚಳವಳಿಯಲ್ಲಿ ಖಾದೀ ಸ್ವಾಭಾವಿಕವಾಗಿಯೇ ಪ್ರಭಾವೀ ಪಾತ್ರ ವಹಿಸಿತು. ಖಾದೀ ಧರಿಸುವುದು ಭಾರತ ರಾಷ್ಟ್ರೀಯತೆಯ ಒಂದು ಸಂಕೇತವಾಯಿತು. ಒಮ್ಮೆ, ಜವಹರಲಾಲ್ ನೆಹರೂ ಅದನ್ನು ಸ್ವಾತಂತ್ರ್ಯ ಸಂಕೇತದ ಪೋಷಾಕು ಎಂದು ಕರೆದರು.

	ಖಾದೀ ಉದ್ಯಮ : ಗಾಂಧೀಜಿ ಖಾದಿಗೆ ಪ್ರಾಶಸ್ತ್ಯ ಕೊಡಲು ಹಲವಾರು ಕಾರಣಗಳನ್ನು ಕಂಡರು. ಪ್ರಥಮತಃ ಇದರ ಉದ್ದೇಶ ರಾಷ್ಟ್ರದ ಏಳು ಲಕ್ಷಹಳ್ಳಿಗಳಲ್ಲಿ ಅರೆಹೊಟ್ಟೆ ತಿಂದು, ಅರೆನಗ್ನರಾಗಿ ಜೀವಿಸುತ್ತಿದ್ದ ಕೋಟ್ಯಂತರ ಜನಸ್ತೋಮಕ್ಕೆ ಬದುಕಿನ ಆಶಾಕಿರಣ ಮೂಡುವಂತೆ ಮಾಡುವುದಾಗಿದ್ದಿತು. ಗಾಂಧೀಜಿ ಕೊಟ್ಟ ಇತರ ಕಾರಣಗಳಿವು: 1 ವಿರಾಮ ಹೊಂದಿದ್ದು, ನಾಲ್ಕು ಕಾಸಿನ ಅವಶ್ಯಕತೆ ಇದ್ದವರಿಗೆ ತತ್ ಕ್ಷಣದ ಉದ್ಯೋಗವನ್ನು ಕಲ್ಪಿಸಬಲ್ಲುದು. 2 ದೇಶದ ಬಹುಮಂದಿಗೆ ಪರಿಚಯವಿರುವಂಥದು. 3 ಕಲಿಯಲು ಸುಲಭ. 4 ಬೇಕಾದ ಬಂಡವಾಳ ತೀರ ಕಡಿಮೆ. 5 ಚರಕವನ್ನು ಸುಲಭವಾಗಿ, ಕಡಿಮೆ ಬೆಲೆಗೆ ತಯಾರಿಸಬಹುದು. 6 ಕ್ಷಾಮ ಮತ್ತು ಅಭಾವಗಳ ಕಾಲದಲ್ಲಿ ತತ್ ಕ್ಷಣಪರಿಹಾರವನ್ನು ನೀಡಬಲ್ಲುದು. 7 ಬಡವರಾದವರಿಗೆ ಕೊಟ್ಯಂತರ ರೂಪಾಯಿಗಳನ್ನು ಹಂಚಬಲ್ಲದು. 8 ಸಹಕಾರ ಬುದ್ಧಿಯನ್ನು ಕಲಿಸಲು ಶಕ್ತಿಯುತವಾದ ಸಾಧನ. 9 ಗ್ರಾಮೀಣ ಜನರಿಗೂ ಲಕ್ಷಾಂತರ ಹಸಿದ ಜನಕ್ಕೂ ಹೊಸ ಬದುಕಿನ ಹೊಸ ಭರವಸೆಯನ್ನು ತರಬಲ್ಲುದು. 10 ಬಡತನಕ್ಕಿಂತ ಸೋಮಾರಿತನ ಕೆಟ್ಟುದ್ದು. ಅದು ಎಲ್ಲ ಪಾತಕಗಳ ಮೂಲ. ಅದನ್ನು ಈ ಉದ್ಯಮ ನಿವಾರಿಸಬಲ್ಲುದು.

	ಖಾದಿಯ ಸಾಧ್ಯತೆಗಳನ್ನು ಕುರಿತು ಗಾಂಧೀಜಿ ತುಂಬ ಬಣ್ಣಿಸಿದ್ದಾರೆ. ಅವು ಕೇವಲ ಮಾತುಗಳೇ ಆಗಿರದೆ. ವಾಸ್ತವ ರೂಪದಲ್ಲಿ ವ್ಯಕ್ತವಾದಂಥವು. ಮಾನವತೆ, ಅರ್ಥೋತ್ಪನ್ನ, ಸ್ವಾವಲಂಬನ, ಪ್ರೇಮ ಅಥವಾ ಅಹಿಂಸೆ, ಸಮತೆ ಇವುಗಳೆಲ್ಲ ಖಾದಿ ಉದ್ಯಮದಲ್ಲಿ ಬೀಜರೂಪವಾಗಿ ಅಡಗಿವೆ. ಸ್ವಾತಂತ್ರ್ಯಸಿದ್ಧಿಗೆ ಖಾದಿ ನಿಜವಾದ ಹಾದಿ. ಸ್ವದೇಶೀ ಭಾವನೆ ಗಾಂಧೀ ಕಲ್ಪನೆಯ ಅಹಿಂಸಕ ಸಮಾಜ ರಚನೆಗೆ ಎಂದರೆ, ಶೋಷಣೆ, ವರ್ಗ ಮತ್ತು ವರ್ಣ ಭೇದಗಳಿಂದ ಮುಕ್ತವಾದ ಸಮಾಜರಚನೆಗೆ ಪೋಷಕ. ಅದು ಕಾಯಕದ ಅಥವಾ ಅನ್ನಶ್ರಮದ ಸಂಕೇತ. ಅಮೀರೀ-ಗರೀಬೀ ಎರಡೂ ಇಲ್ಲದ ಮಾನವೀಮೌಲ್ಯ ಪ್ರಧಾನವಾದ ಸವಸಮಾಜದ ರಚನೆಯೇ ಅದರ ಗುರಿ. ಸಾರ್ವತ್ರಿಕವಾಗಿಯೂ ಸುಲಭವಾಗಿಯೂ ಆಗುವ ಉದ್ಯಮವೆಂದರೆ. ಖಾದಿಯೊಂದೇ. ಒಮ್ಮೆ ಗಾಂಧೀಜಿ ಕಳಕಳಿಯಿಂದ ಹೇಳಿದ ಮಾತುಗಳಿವು: ರಾಟೆ ಮತ್ತು ಖಾದಿಯ ಸಂದೇಶ ಒಂದು ಪರಮ ಆಧ್ಯಾತ್ಮಿಕ ಸಂದೇಶ. ಅದು ಪರಮ ಆಧ್ಯಾತ್ಮಿಕ ಸಂದೇಶವಾಗಿರುವಂತೆಯೇ ದೇಶಕ್ಕೆ ಪರಮ ಆರ್ಥಿಕ ಹಾಗೂ ರಾಜಕೀಯ ಮೇಲ್ಮೆಯನ್ನು ತರುವಂಥದೂ ಆಗಿವೆ. ಯಾವುದೇ ಧರ್ಮತತ್ತ್ವವನ್ನು ಮೂಲ್ಯವುಳ್ಳುದು ಎನ್ನಬೇಕಾದರೆ ಅದು ಆರ್ಥಿಕ ಕ್ಷೇತ್ರದಲ್ಲಿ ಉಪಯುಕ್ತವೆನಿಸಬೇಕು. ಹಾಗೆಯೇ ಅರ್ಥವಿಚಾರ ಮೌಲ್ಯವುಳ್ಳುದು ಎನ್ನಬೇಕಾದರೆ, ಅದು ಧರ್ಮತತ್ತ್ವವನ್ನು ಮತ್ತು ಆತ್ಮತತ್ತ್ವವನ್ನು ಒಳಗೊಂಡಿರಬೇಕು. ಹೀಗೆ ಖಾದೀ ಉದ್ಯಮದಲ್ಲಿ ಅರ್ಥಭಾವನೆ ಪೂರ್ಣವಾಗಿ ಧರ್ಮಪ್ರೇರಿತ; ಆದುದರಿಂದ ಅದರಲ್ಲಿ ಶೋಷಣೆಗೆ ಅವಕಾಶವಿಲ್ಲ.

	ಖಾದೀ ಉದ್ಯಮವನ್ನು ಟೀಕಿಸುವವರು ಬಹಳ ಮಂದಿ, ಅದು ಯಂತ್ರ ವಿರೋಧಿ ಎಂಬುದು ಒಂದು ಪ್ರಧಾನ ಟೀಕೆ. ಇದು ತಪ್ಪುಭಾವನೆಯೆಂದು ಶೃತಪಡಿಸಲು ಗಾಂಧೀಜಿ ಸದಾ ಸಿದ್ಧರಿದ್ದರು: ಅವರು ಹೀಗೆ ಹೇಳಿದರು; 'ಈ ನನ್ನ ದೇಹವೇ ಒಂದು ಸೂಕ್ಷ್ಮ ಯಂತ್ರವಾಗಿರುವಾಗ ಎಲ್ಲ ಯಂತ್ರಗಳನ್ನೂ ನಾನು ಹೇಗೆ ತಾನೆ ವಿರೋಧಿಸಲಿ? ನೂಲುವ ರಾಟೆಯೂ ಒಂದು ಯಂತ್ರವೇ. ನನ್ನ ವಿರೋಧವಿರುವುದು ಯಂತ್ರದ ಬಗೆಗೇ ಅಲ್ಲ. ಅದರ ಬಗೆಗೆ ಇರುವ ಹುಚ್ಚು ಅಭಿಲಾಷೆಗೆ. ಆ ಹುಚ್ಚು ಅಭಿಲಾಷೆ ಮತ್ತು ಶ್ರಮ ಉಳಿತಾಯ, ಹೆಚ್ಚು ವಿಶ್ರಾಂತಿ ಎಂಬ ಕಲ್ಪನೆಗಳ ಬಗೆಗೆ ನನ್ನ ವಿರೋಧ. ಮಾನವರು ಹೀಗೆ ಯಂತ್ರಗಳಿಂದ ಶ್ರಮ ಉಳಿತಾಯ ಮಾಡುತ್ತ ಹೋದರೆ, ಕೊನೆಗೊಂದು ದಿನ, ಸಹಸ್ರಾರು ಮಂದಿಗೆ ಕೆಲಸವೇ ಇಲ್ಲದಂತಾಗಿ, ಹೊಟ್ಟೆಗಿಲ್ಲದೆ ಮಡಿದಾರು. ಕಾಲ ಮತ್ತು ಶ್ರಮ ಎರಡೂ ಮಾನವ ಕುಲದ ಯಾವುದೋ ಒಂದು ಪಂಗಡಕ್ಕೆ ಮಾತ್ರ ದೊರಕುವುದನ್ನು ನಾನು ಒಪ್ಪುವುದಿಲ್ಲ; ಅದು ಎಲ್ಲರಿಗೂ ದೊರಕಬೇಕು. ಸಂಪತ್ತಿನ ಶೇಖರಣೆ ಕೆಲವರ ಹಸ್ತದಲ್ಲೇ ಆಗದೆ, ಎಲ್ಲರಿಗೂ ದೊರಕುವಂತಾಗಬೇಕು. ಮಾನವನೇ ಪರಮ ಗಣ್ಯ. ಯಂತ್ರ ಮಾನವನ ಜೀವನವನ್ನು ಅಂಗಾಂಗಗಳನ್ನು ಅಂದಗೆಡಿಸಿ, ವಿಕಾರಗೊಳಿಸಬಾರದು.'

	ಈ ನಾಲ್ಕು ಮಾತುಗಳಲ್ಲಿ ಖಾದೀ ಬಗೆಗೆ, ಯಂತ್ರದ ಬಗೆಗೆ ಗಾಂಧೀಜೀಯ ವಿಚಾರ ಸರಣಿ ಸ್ಪಷ್ಟ. ಇಂದು ಶ್ರಮ ಉಳಿತಾಯ ಮಾಡುವ ಯಂತ್ರ ನಿರುದ್ಯೋಗವನ್ನು ಸೃಷ್ಟಿಸುತ್ತದೆ. ಸಂಪತ್ತು ಕೆಲವರಲ್ಲೇ ಶೇಖರವಾಗಿ, ಸಮಾಜ, ಶೋಷಕ-ಶೋಷಿತ ಎಂದು ಹೋಳಾಗಿ ಹೋಗಿದೆ. ಇದು ಯಂತ್ರಕುಶಲತೆಯ, ನಾಗರೀಕತೆಯ ಅನಿಷ್ಟ ಪರಿಣಾಮ. ಗಾಂಧೀಜಿ ಇದರ ವಿರೋಧಿಯೇ ಆಗಿದ್ದರು. ಯಾವ ಯಂತ್ರ ಮಾನವೀ ಮೌಲ್ಯ ಸಂವರ್ಧನೆ ಮಾಡಿದರೂ ಅದು ಅವರಿಗೆ ಸ್ವಾಗತಾರ್ಹವಾಗಿತ್ತು.

	ಖಾದೀ ಬಗೆಗೆ ಇನ್ನೊಂದು ಟೀಕೆಯೂ ವಿಪುಲವಾಗಿ ಕೇಳಿ ಬರುತ್ತಿತ್ತು. ನೂಲುವುದಕ್ಕೆ ಅಗಾಧ ಸಮಯ ಉಪಯೋಗಿಸದ ಹೊರತು. ವಸ್ತ್ರ ಸ್ವಾವಲಂಬನೆ ಆಗಲಾರದಾಗಿ ಅದರಿಂದ ಜನತೆಗೆ ಆಗುವ ಉಪಯೋಗ ಕಡಿಮೆ. ಬದಲು ವಸ್ತ್ರೋತ್ಪನ್ನವನ್ನು ಯಂತ್ರೋದ್ಯಮದ ಮೂಲಕ ವ್ಯವಸ್ಥೆ ಮಾಡಿದರೆ ಲಕ್ಷಾಂತರ ಮಂದಿಗೆ ಶ್ರಮ ಕಡಿಮೆಯಾಗಿ ಬೌದ್ಧಿಕ ಚಟುವಟಿಕೆಗಳಿಗೆ ಹೆಚ್ಚು ಕಾಲ ದೊರಕುವುದೆಂದು ವಾದಿಸಲಾಗುತ್ತಿತ್ತು. ಇದಕ್ಕೆ ಗಾಂಧೀಜಿಯ ಉತ್ತರ ಹೀಗಿತ್ತು: ವಿರಾಮವೆಂಬುದು ಒಂದು ಹಂತದವರೆಗೆ ಆವಶ್ಯಕ ಮತ್ತು ಒಳ್ಳೆಯದು, ಬೆವರು ಹರಿಯುವಂತೆ ದುಡಿದು. ಅನ್ನ ತಿನ್ನಬೇಕೆಂದು ಮಾನವನನ್ನು ಭಗವಂತ ಸೃಷ್ಟಿಸಿದ. ಯಾವುದೋ ಬಗೆಯ ಯಂತ್ರ ಮಾಯಾಜಾಲದಿಂದ ಆಹಾರ ವಸ್ತುಗಳೂ ಸೇರಿದಂತೆ, ನಮಗೆ ಬೇಕಾದುದನ್ನೆಲ್ಲ ಉತ್ಪನ್ನ ಮಾಡಿಕೊಳ್ಳುವ ಕಾಲ ಬರುತ್ತದೆನ್ನುವುದನ್ನು ನೆನೆದರೆ, ನಮಗೆ ಭಯವಾಗುತ್ತದೆ.

	ಖಾದೀ ಸುಲಭ ಬೆಲೆಗೆ ದೊರೆಯಲು ಸಾಧ್ಯವಿಲ್ಲವೆಂಬುದು ಮಗುದೊಂದು ಟೀಕೆ. ಇಂದಿಗೂ ಇದು ಉಳಿದು ಬಂದಿದೆ. ಸ್ವದೇಶೀ ಅಥವಾ ವಿದೇಶೀ ಗಿರಣಿಗಳಲ್ಲಿ ಉತ್ಪನ್ನವಾದ ವಸ್ತ್ರದ ಬೆಲೆಯೊಂದಿಗೆ ಖಾದಿಯನ್ನು ಹೋಲಿಸಬಾರದು. ಏಕೆಂದರೆ ಗಿರಣಿಗಳು ರಾಜ್ಯಸರ್ಕಾರಗಳ ನೆರವು ಪಡೆದು, ವ್ಯವಸ್ಥಿತ ಉದ್ಯಮಗಳಾಗಿರುತ್ತವೆ. ಅವು ಅಪರಿಮಿತ ಸಹಾಯಧನವನ್ನೂ ಬಂಡವಾಳವನ್ನೂ ಹೊಂದಿರುವುದರಿಂದ ತಮ್ಮ ಉತ್ಪನ್ನವನ್ನು ತಾತ್ಕಾಲಿಕವಾಗಿ ನಷ್ಟಕ್ಕೂ ಮಾರಲು ಸಿದ್ಧವಿರುತ್ತವೆ. ಖಾದೀ ಉದ್ಯಮ ಹಾಗೆ ಮಾಡಲು ಸಾಧ್ಯವೇ? ದೇಶದ ಲಕ್ಷಾಂತರ ಬಡ ಗ್ರಾಮೀಣ ಜನರ ದೃಷ್ಟಿಯಿಂದ ಖಾದಿಯೊಂದೇ ನಿಜವಾಗಿಯೂ ಸುಲಭ ಬೆಲೆಗೆ ದೊರಕುವಂಥದು-ಎಂದು ಗಾಂಧೀಜಿ ಸಾಧಿಸುತ್ತಿದ್ದರು.

	ಖಾದೀ ಕೇವಲ ವಸ್ತ್ರವಲ್ಲ. ಅದೊಂದು ತತ್ತ್ವ. ಖಾದೀತತ್ತ್ವವೆಂದರೆ ಏನು? ಅದು ಭಾರತದ ಕೋಟ್ಯಂತರ ದರಿದ್ರ ನಾರಾಯಣರ ಸಂಕೇತ. ಅವರಿಗಾಗಿ ಬದುಕು ಸರಳವಾಗಬೇಕು, ಅಪಾರ ಶಾಂತಿ, ಸತ್ಯ ಮತ್ತು ಅಹಿಂಸೆಗಳಲ್ಲಿ ಎಂದಿಗೂ ಚ್ಯುತಿ ಹೊಂದದ ನಂಬಿಕೆ ಬೆಳೆಯಬೇಕು-ಎಂಬುದು ಅದರ ಆಶೆ. ಬಡವ-ಬಲ್ಲಿದರ ಅಂತರವನ್ನು ಅದು ಕಡಿಮೆ ಮಾಡುತ್ತದಲ್ಲದೆ ಬಂಡವಾಳದ ಹೊರೆಯಿಂದ ಶ್ರಮಜೀವಿಗಳನ್ನು ಪಾರಾಗಿಸುತ್ತದೆ. ಖಾದೀ ತಯಾರಿಸಿ ಧರಸಿದಲ್ಲಿ ಶಾಂತಿಯುತ ಸಮಾಜ. ಸರ್ವೋದಯ ಸಮಾಜಗಳ ರಚನೆ ಸುಲಭವಾಗುತ್ತದೆ-ಎಂಬುದು ಗಾಂಧೀಜಿಯ ಅಚಲ ನಂಬಿಕೆಯಾಗಿತ್ತು.

	ಖಾದೀ ಆಂದೋಲನ: 1915ರಲ್ಲಿ ಗಾಂಧೀಜಿ ದಕ್ಷಿಣ ಆಫ್ರಿಕದಿಂದ ಭಾರತಕ್ಕೆ ಹಿಂದಿರುಗಿ ಬಂದ ಮೇಲೆ, ಅಹಮದಾಬಾದಿನ ಬಳಿ ಸಾಬರಮತಿ ಆಶ್ರಯವನ್ನು ಸ್ಥಾಪಿಸಿದರು. ಅಲ್ಲಿ ಚರಕದಿಂದ ನೂಲುವುದನ್ನು ನೆಯ್ಗೆ ಮಾಡುವುದನ್ನು ಆರಂಭಿಸಿದರು. ಆಶ್ರಮದ ಕಾರ್ಯಕರ್ತರಿಗೆ ಅದೊಂದು ದೈನಿಕ ಕ್ರಿಯೆಯಾಯಿತು. ನೂಲುವುದು ಪವಿತ್ರ ಕಾರ್ಯವಾಗಿ ಸೂತ್ರ ಯಜ್ಞ ಎನಿಸಿತು.

	1919ರಲ್ಲಿ ನಡೆದ ಅಮೃತಸರದ ಕಾಂಗ್ರೆಸ್ ಅಧಿವೇಶನ ಸ್ವದೇಶೀ ಸ್ವರೂಪವನ್ನು ಖಾದೀ ಕಾರ್ಯದ ಮೂಲಕ ವ್ಯಕ್ತಪಡಿಸಿತು. ಇದಕ್ಕೆ ಗಾಂಧೀಜಿಯೇ ಕಾರಣ. ಬ್ರಿಟಿಷ್ ಸರ್ಕಾರದೊಂದಿಗೆ ಕಾಂಗ್ರೆಸ್ ತನ್ನ ಅಸಹಕಾರ ಆಂದೋಲನವನ್ನು ಆರಂಭಿಸುವ (1912) ಮುನ್ನ, ದೇಶಾದ್ಯಂತ ಖಾದೀ ಪ್ರಚಾರ ಕಾರ್ಯ ನಡೆಸಬೇಕೆಂದು ತೀರ್ಮಾನಿಸಿತು. ಅದರ ಅನಂತರ ನಡೆದ ಕಾಂಗ್ರೇಸ್ ಅಧಿವೇಶನಗಳಲ್ಲಿ ರಚನಾತ್ಮಕ ಕಾರ್ಯದ ಒಂದು ಪ್ರಧಾನ ಅಂಗವಾಗಿ ಖಾದೀ ಅಂಗೀಕೃತವಾಯಿತು. ಅಸಹಕಾರ ಆಂದೋಲನದ ಕಾಲದಲ್ಲೂ ಮುಂದೆ ಸವಿನಯನ ಶಾಸನೋಲ್ಲಂಘನ ಕಾಲದಲ್ಲೂ ಖಾದೀ ಸತ್ಯಾಗ್ರಹಿಗಳ ಪೋಷಾಕು ಆಯಿತು.

	1925ರ ವರೆಗೂ ಖಾದೀ ಕಾರ್ಯ ಕಾಂಗ್ರೆಸ್ ಸಮಿತಿಗಳ ಕಾರ್ಯವೇ ಆಗಿತ್ತು. ಆ ವರ್ಷ, ಅಖಿಲ ಭಾರತ ಕಾಂಗ್ರೆಸ್ ಸಮಿತಿ ಅಖಿಲ ಭಾರತ ಚರಕಾ ಸಂಘ ಎಂಬ ಸ್ವತಂತ್ರ ಸಂಸ್ಥೆಯನ್ನು ಸ್ಥಾಪಿಸಿತು. ಈ ಸಂಘದ ಕಾರ್ಯ ಕಾಂಗ್ರೆಸ್ಸಿನ ಇತಿಹಾಸದೊಂದಿಗೆ ಏಕತ್ರವಾಗಿ ಸೇರಿಹೋಗಿದೆ. ಆದರೂ 1941-42ನೆಯ ವರ್ಷ ಖಾದೀ ಕಾರ್ಯ ಅತ್ಯಂತ ಎತ್ತರಕ್ಕೆ ಏರಿತು. ಭಾರತದ 15,000 ಹಳ್ಳಿಗಳಲ್ಲಿ ಚರಕಾ ಸಂಘದ ಕಾರ್ಯ ನಡೆಯುತ್ತಿತ್ತು. 3,25,000 ಮಂದಿ ನೂಲುವವರೂ 25,000 ನೇಕಾರರೂ 5,000 ಇತರ ಕಾರ್ಯಕರ್ತರೂ ಇದ್ದರು. ಈ ಕಾರ್ಯದಲ್ಲಿ ಹರಿಜನರು, ಹಿಂದೂಗಳು, ಮುಸ್ಲಿಮರು ಯಾವ ಭೇದಭಾವವೂ ಇಲ್ಲದೆ, ಸಮಷ್ಟಿ ಪ್ರಜ್ಞೆಯಿಂದ ಕೆಲಸ ಮಾಡುತ್ತಿದ್ದರು.

	1942ರ ಕ್ವೆಟ್-ಇಂಡಿಯ ಚಳವಳಿ ಕಾಲದಲ್ಲಿ ಖಾದೀ ಕಾರ್ಯ ಬಹಳ ಕಷ್ಟ ನಷ್ಟಗಳಿಗೆ ಗುರಿಯಾಯಿತು. ಅನೇಕ ಕಾರ್ಯಕರ್ತರು ಸೆರೆಮನೆ ಸೇರಿದರು. ಅನೇಕ ಖಾದೀ ಭಂಡಾರಗಳು ಬೆಂಕಿಗೆ ಆಹುತಿಯಾದುವು. ಉತ್ಕಲ, ಬಂಗಾಳ, ಬಿಹಾರ, ರಾಜಸ್ಥಾನ, ಗುಜರಾತು ಮತ್ತು ಕರ್ನಾಟಕ ಪ್ರಾಂತಗಳಲ್ಲಿ ಬಹಳ ನಷ್ಟವಾಯಿತು. ತಮಿಳುನಾಡು, ಆಂಧ್ರ, ಕೇರಳ ಮೊದಲಾದ ಪ್ರಾಂತಗಳಲ್ಲಿ ಬಹಳಲ್ಲದಿದ್ದರೂ ಸಾಕಷ್ಟು ನಷ್ಟವಾಯಿತು.

	1945ರಲ್ಲಿ ಗಾಂಧೀಜಿ ಸೆರೆಮನೆಯಿಂದ ಹೊರಕ್ಕೆ ಬಂದಮೇಲೆ, ರಚನಾತ್ಮಕ ಕಾರ್ಯಗಳಿಗೆ ಹೊಸ ಸ್ಫೂರ್ತಿ ನೀಡಿ ಅವನ್ನು ಚೇತನಗೊಳಿಸಲು ಯತ್ನಿಸಿದರು. ಖಾದೀ ಕಾರ್ಯ ಸಮಗ್ರ ಗ್ರಾಮಸೇವೆಯ ಕಾರ್ಯವಾಗಬೇಕೆಂದು ವ್ಯವಸ್ಥೆ ಮಾಡಿದರು.

	ರಾಷ್ಟ್ರಕ್ಕೆ ಸ್ವಾತಂತ್ರ್ಯ ಪ್ರಾಪ್ತಿಯಾದ ಮೇಲೆ (1947) ಖಾದೀ ಕಾರ್ಯವನ್ನು ಸರ್ಕಾರವೇ ವಹಿಸಿಕೊಂಡು, ಅದರ ಮತ್ತು ಗ್ರಾಮೋದ್ಯೋಗಗಳ ಬೆಳೆವಣಿಗೆಗೆ ಶಾಸನಬದ್ಧ ಸಂಸ್ಥೆಗಳನ್ನು-ರಾಜ್ಯ ಮಟ್ಟದಲ್ಲಿ ಖಾದೀ ಮತ್ತು ಗ್ರಾಮೋದ್ಯೋಗ ಮಂಡಲಿಗಳು, ರಾಷ್ಟ್ರಮಟ್ಟದಲ್ಲಿ ಖಾದೀ ಮತ್ತು ಗ್ರಾಮೋದ್ಯೋಗಗಳ ಆಯೋಗ-ರಚಿಸಿತು. ಈ ಸಂಸ್ಥೆಗಳು ರಾಷ್ಟ್ರೀಯ ಯೋಜನೆಗಳಿಗೆ ಅನುಗುಣವಾಗಿ ಖಾದೀ ಉದ್ಯಮಕ್ಕೆ ಧನಸಹಾಯ ಮಾಡುತ್ತಿವೆ. ಆದರೆ, ಸ್ವಾತಂತ್ರ್ಯಕ್ಕಾಗಿ ಹೋರಾಟವಾಗುತ್ತಿದ್ದ ಕಾಲದಲ್ಲಿ ಖಾದಿಗೆ ಇದ್ದ ಪ್ರೋತ್ಸಾಹ, ಕಾರ್ಯೋತ್ಸಾಹ ಇಂದು ಮಾಯವಾಗುತ್ತಿವೆ. ಖಾದೀಕಾರ್ಯ ನಡೆದರೂ ಖಾದೀ ಸತ್ತ್ವ ಇಲ್ಲವಾಗುತ್ತಿದೆ.

	ರಾಷ್ಟ್ರದ ಔದ್ಯೋಗಿಕ ಕ್ಷೇತ್ರದಲ್ಲಿ ಖಾದೀ ಭವಿಷ್ಯ ಏನೇ ಆಗಲಿ, ಅದು ಗಾಂಧೀ ನಾಯಕತ್ವದ ಸ್ವಾತಂತ್ರ್ಯ ಹೋರಾಟ ಯುಗದಲ್ಲಿ ವಹಿಸಿದ ಪಾತ್ರ ಅಮೋಘ. ಗಾಂಧೀಜಿ ಅಹಿಂಸಾ ಮಾರ್ಗದಿಂದ ಸರ್ವೋದಯ ಸಮಾಜ ರಚಿಸಬೇಕೆಂದು ಮಾಡಿದ ಕಾರ್ಯದಲ್ಲಿ ಅಹಿಂಸೆಯ ಸಂಕೇತವಾದ ಖಾದೀ ವಹಿಸಿದ ಪಾತ್ರ ಹಿರಿದು. ಅಹಿಂಸೆಯ ಸಾಧನ ಪಥದಿಂದ ಜನ ಬಹಳ ದೂರ ಸರಿದುಹೋಗಿದ್ದಾರೆ. ಇಂದು ಖಾದೀಯ ಬೆಲೆ ಲಘುವಾಗುತ್ತಿದೆ. ಇದು ಖಾದೀ ಧಾರಿಗಳ ನ್ಯೂನತೆಯ ಪರಿಣಾಮವೇ ಹೊರತು, ಖಾದಿ ಬಟ್ಟೆಯದಲ್ಲವೆಂಬುದನ್ನು ಮರೆಯಲಾಗದು.							(ಜಿ.ವಿ.ಎನ್.)
ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ